ಮರೆಯೋದುಂಟೆ ಮೈಸೂರು ದೊರೆಯ… ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯ..
HTML-код
- Опубликовано: 11 фев 2025
- ಅಂದಿನ ಮೈಸೂರು ರಾಜ್ಯವನ್ನು ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ್ದರು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್.
ಇಡೀ ರಾಜ್ಯದ ಇತರೆ ಭಾಗಗಳಿಗೆ ಹೋಲಿಸಿದರೆ ಹಳೆ ಮೈಸೂರು ಭಾಗ ಅಭಿವೃದ್ಧಿಯಲ್ಲಿ ಮಂಚೂಣಿಯಲ್ಲಿರಲು ಪ್ರಮುಖ ಕಾರಣ, ಇಲ್ಲಿನ ಭವ್ಯ ಇತಿಹಾಸ. ಇದಕ್ಕೆ ಅಡಿಪಾಯ ಹಾಕಿದವರೇ ನಾಲ್ವಡಿ ಕೃಷ್ಣರಾಜ ಒಡೆಯರ್. ಅವರ ಸ್ಮರಣೆಯೊಂದಿಗೆ ಅವರು ನಮಗಾಗಿ ನೀಡಿದ ಕೊಡುಗೆಗಳನ್ನೂ ಸ್ಮರಿಸಲೇಬೇಕಿದೆ.
ಸಹಕಾರಿ ಕಾರ್ಮಿಕ ಪರಿಹಾರ ಕಾಯ್ದೆ, ಮೈಸೂರು ಗ್ರಾಮ ನ್ಯಾಯಾಲಯ ಕಾಯ್ದೆ, ಗ್ರಾಮ ಪಂಚಾಯ್ತಿಗಳ ಕಾಯ್ದೆಯನ್ನು ನಾಲ್ವಡಿಯವರ ಕಾಲದಲ್ಲಿ ಜಾರಿಗೆ ತರಲಾಯ್ತು. ಭದ್ರಾವತಿಯ ಮೈಸೂರು ಕಬ್ಬಿಣದ ಕಾರ್ಖಾನೆ, ಬೆಂಗಳೂರಿನ ಸಾಬೂನು ಕಾರ್ಖಾನೆ, ಮೈಸೂರಿನ ಗಂಧದೆಣ್ಣೆ ಕಾರ್ಖಾನೆ, ಸಿಮೆಂಟ್ ಕಾರ್ಖಾನೆ, ಮಂಡ್ಯದಲ್ಲಿ ಮೈಸೂರು ಸಕ್ಕರೆ ಕಂಪನಿ, ಮೈಸೂರು ಪೇಪರ್ ಮಿಲ್, ಮಂಗಳೂರು ಹೆಂಚು ಕಾರ್ಖಾನೆ, ಷಹಬಾದಿನ ಸಿಮೆಂಟ್ ಕಾರ್ಖಾನೆ, ಮೈಸೂರಿನ ಅರಗು ಮತ್ತು ಬಣ್ಣದ ಕಾರ್ಖಾನೆ, ಕೊಡಗಿನ ಕಾಫಿ ಸಂಶೋಧನಾ ಕೇಂದ್ರಗಳು ಇವರ ಕಾಲದಲ್ಲಿಯೇ ಪ್ರಾರಂಭಗೊಂಡವು.
ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ರಾಜ್ಯದ ನಾನಾ ಭಾಗಗಳಲ್ಲಿ 270 ಉಚಿತ ಆಸ್ಪತ್ರೆಗಳು ಕಾರ್ಯಾರಂಭ ಮಾಡಿದವು. ಬೆಂಗಳೂರಿನ ಮಿಂಟೊ ಕಣ್ಣಾಸ್ಪತ್ರೆ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿತ್ತು. ಮೈಸೂರಿನ ಕ್ಷಯರೋಗ ಆಸ್ಪತ್ರೆ ಉತ್ತಮಗೊಂಡಿತು. ವಾಣಿಜ್ಯ ಕ್ಷೇತ್ರದಲ್ಲಿ ಮೈಸೂರು ಬ್ಯಾಂಕ್ ಖಾಸಗೀ ಸಹಭಾಗಿತ್ವದೊಡನೆ ಕಾರ್ಯಾರಂಭ ಮಾಡಿತು. 1906ರಲ್ಲಿಯೇ ಸಹಕಾರ ಸಂಘಗಳನ್ನು ಸ್ಥಾಪಿಸಲಾಯಿತು. ರೈತರಿಗಾಗಿ ಜಮೀನು ಅಡಮಾನ ಬ್ಯಾಂಕುಗಳು ಆರಂಭವಾದವು.
ಮೈಸೂರು, ಬೆಂಗಳೂರು ನಗರಗಳಲ್ಲಿ ನಿರ್ಮಾಣವಾದ ಶ್ರೇಷ್ಠ ಕಟ್ಟಡಗಳು, ರಸ್ತೆಗಳು, ವಿದ್ಯುತ್ ದೀಪಗಳು, ಉದ್ಯಾನ ವನಗಳು, ಜಲ ಕಾರಂಜಿಗಳು, ವಿಹಾರಿ ಧಾಮಗಳು, ಶ್ರೇಷ್ಠ ವಿದ್ಯಾ ಸಂಸ್ಥೆಗಳು, ವಿದ್ಯಾರ್ಥಿ ನಿಲಯಗಳು, ಅನಾಥಾಶ್ರಮಗಳು, ಛತ್ರಗಳು ಹೀಗೆ ಹತ್ತು ಹಲವು ಕಟ್ಟಡಗಳ ನಿರ್ಮಾತೃ ಇವರೇ ಆಗಿದ್ದಾರೆ. ಆಗಸ್ಟ್ 3, 1940ರಲ್ಲಿ ನಿಧನರಾದ ನಾಲ್ವಡಿಯವರ ಸಾಧನೆ ಮರೆಯಲು ಸಾಧ್ಯವೇ ಇಲ್ಲ. ಹಾಗಾಗಿಯೇ ಕವಿ ಹನಸೋಗೆ ಸೋಮಶೇಖರ್ ಅವರ ಕವನದ “ಮರೆಯೋದುಂಟೆ ಮೈಸೂರು ದೊರೆಯ… ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯ..” ಸಾಲನ್ನು ಮರೆಯಲು ಸಾಧ್ಯವೇ ಇಲ್ಲ.