🌺 ಗೊಂಡ ಸಮಾಜ ಹರಿಸೇವಾ ಕಾರ್ಯ ಬಿಟ್ಟಿಬೆಳ್ಳು 🌺 || ಭಟ್ಕಳ || ಉತ್ತರ ಕನ್ನಡ ||
HTML-код
- Опубликовано: 5 фев 2025
- ಗ್ರಾಮೀಣ ಸಂಪ್ರದಾಯದ ಸೊಗಡಿನಲ್ಲಿ ತಿರುಪತಿ ತಿಮ್ಮಪ್ಪನ ಪ್ರೀತ್ಯರ್ಥ ನಡೆಯುವ ಸಂಪ್ರದಾಯ ಬದ್ಧವಾದ ಸಂಭ್ರಮದ ಆಚರಣೆಯೇ 'ಹರಿಸೇವಾ ಕಾರ್ಯ'.
ಸಾಕ್ಷಾತ್ ತಿರುಪತಿಯ ವೈಭವವೇ ಇಲ್ಲಿ ಮೇಳೈಸಿದೆ ಅನ್ನುವಷ್ಟು ಭಕ್ತಿ, ಸಂಭ್ರಮದಿಂದ ಹರಿಸೇವೆ ನಡೆಯುತ್ತಿದೆ. ಭಟ್ಕಳದ ಜನತೆ ತಿರುಪತಿ ತಿಮ್ಮಪ್ಪನ ಪರಮ ಭಕ್ತರು. ಹಳೆಯ ತಿರುಪತಿ ಕೂಡಾ ಭಟ್ಕಳದಲ್ಲೇ ಇತ್ತು ಎನ್ನುವುದನ್ನು ಇತಿಹಾಸ ತಜ್ಞರು ಹೇಳುತ್ತಾರೆ.
ಒಂದು ಕುಟುಂಬದ ಎಲ್ಲರೂ ಸೇರಿ ಮಾಡುವುದಾದರೂ ಇಡೀ ಊರಿನಲ್ಲಿ ಹಬ್ಬದ ವಾತಾವರಣ ಉಂಟಾಗುತ್ತದೆ. ಸಂಬಂಧಿಗಳು, ಊರವರು, ಪರವೂರಿನವರು ಪಾಲ್ಗೊಳ್ಳುತ್ತಾರೆ. ಪ್ರತಿ ದಿನವೂ ಸಾವಿರಾರು ಜನರು ಅನ್ನ ಸಂತರ್ಪಣೆಯಲ್ಲಿ ಭಾಗವಹಿಸುತ್ತಾರೆ.
ಕಲಶ ಗದ್ದೆ:
ಶನಿವಾರದಂದು ಮನೆಯ ಹತ್ತಿರದಲ್ಲಿಯೇ ಇರುವ ನದಿಯ ತೀರದಲ್ಲಿ ಇಲ್ಲವೇ ಕೆರೆಯ ಪಕ್ಕದಲ್ಲಿ ಚಪ್ಪರವನ್ನು ಹಾಕಿ ಕಲಶವನ್ನು ಶೃಂಗರಿಸುತ್ತಾರೆ. ಕಲಶಕ್ಕೆ ಅರ್ಧದಷ್ಟು ನೀರು ತುಂಬಿ ಹೂವುಗಳಿಂದ ಸಿಂಗರಿಸಿ ಚಿನ್ನದ ಸರ, ಚಕ್ರದ ಸರವನ್ನು ಹಾಕುತ್ತಾರೆ. ಅಲ್ಲಿಂದ ಕಲಶವನ್ನು ಕಾರ್ಯದ ಮನೆಯ ತನಕ ಸಾವಿರಾರು ಜನರು ಭವ್ಯವಾದ ಮೆರವಣಿಗೆ ಮೂಲಕ ತರುತ್ತಾರೆ. ಕಲಶವನ್ನು ತರುವ ಪೂರ್ವದಲ್ಲಿ ಕುಟುಂಬದ ಗಂಡಸರು ಹೊಳೆಯಲ್ಲಿ ಸ್ನಾನ ಮಾಡುತ್ತಾರೆ. ಕಲಶದ ಹಿಂಭಾಗದಲ್ಲಿ ಶಂಖ, ಸೂರ್ಯ ಹಾಗೂ ಚಂದ್ರರ ಚಿಹ್ನೆಗಳಿರುವ ಪಂಚ ಲೋಹದ ಹಲಗೆಯನ್ನು ಇಡಲಾಗುತ್ತದೆ.
ಕಲಶವನ್ನು ಹೊತ್ತು ತರುವವರು ಕೆಂಪು ಇಲ್ಲವೇ ಬಿಳಿ ವಸ್ತ್ರ ಧರಿಸಿ, ತಲೆಗೆ ರುಮಾಲು ಸುತ್ತಿರಬೇಕು. ಆತನ ಸೊಂಟಕ್ಕೆ ಬೆಳ್ಳಿಯ ಪಟ್ಟಿ, ಕಾಲಿಗೆ ಗೆಜ್ಜೆ, ಕೈಗಳಿಗೆ ಕಡ್ಗ (ಕೈಗಡಗ) ಕಟ್ಟಿರುತ್ತಾನೆ. ಕಲಶಕ್ಕೆ ಧೂಪ ಹಾಕಿ ಪೂಜೆ ಮಾಡಿ, ನಂತರ ಅದನ್ನು ತಂದು ತುಳಸೀಕಟ್ಟೆಗೆ ಒಂದು ಸುತ್ತು ಹಾಕಿ ತುಳಸೀಕಟ್ಟೆಯ ಎದುರು ಬಾಳೆಯ ದಿಂಡಿನ ಪಟ್ಟೆಯಿಂದ ಕಟ್ಟಿದ ಸುಂದರವಾದ ಮಂಟಪದಲ್ಲಿ ಇಟ್ಟು ಪೂಜೆ ಮಾಡಲಾಗುತ್ತದೆ.
ಶನಿವಾರ ರಾತ್ರಿಯ ವರೆಗೂ ಕಲಶ ಪೂಜೆ ನಡೆಯುತ್ತದೆ. ರಾತ್ರಿ ಕಲಶದ ಎದುರು ನೂರಾರು ಕಾಯಿಗಳನ್ನು ಒಡೆದು ರಾಶಿ ಹಾಕಿ ನಂತರ ಅದರ ಮೇಲೊಂದು ಬಾಳೆ ಹಣ್ಣಿನಗೊನೆ ಇಟ್ಟು ಪೂಜಿಸಲಾಗುತ್ತದೆ. ನಂತರ ಕಾರ್ಯಕ್ಕೆ ಬಂದ ಎಲ್ಲರಿಗೂ ರಾತ್ರಿ ಊಟ ಹಾಕಿ ಕಳಿಸಲಾಗುತ್ತದೆ.
ಮಾರನೆಯ ದಿನ ಭಾನುವಾರ ಕಾಡಿಗೆ ಹೋಗಿ ಮೃಗ ಬೇಟೆಯಾಡುವುದು ವಾಡಿಕೆ. ಆದರೆ ಈಗ ಬೇಟೆಯಾಡುವ ಸಾಮಗ್ರಿಗಳನ್ನಿಟ್ಟು ಪೂಜಿಸಿ ಸ್ವಲ್ಪ ದೂರದಲ್ಲಿರುವ ಕಲಶದ ಗದ್ದೆಗೆ ಹೋಗಿ ಒಂದು ಕಾಯಿಯನ್ನು ಒಡೆದು ಬರುತ್ತಾರೆ. ನಂತರ ಕೋಡಂಗಿ ಬಂದು ತುಳಸೀಕಟ್ಟೆಗೆ ಸುತ್ತ ತಿರುಗಿದ ಮೇಲೆ ಚಪ್ಪರಕ್ಕೆ ಕಟ್ಟಿರುವ ಬಾಳೆಗೊನೆಯನ್ನು ಕೆಳಕ್ಕೆ ಹಾಕಿ ಆತನು ಕೆಳಕ್ಕೆ ಬಂದ ನಂತರ ಕಲಶಕ್ಕೆ ಪೂಜಿಸಲಾಗುವುದು.
ಜೋಗಿ ಪಾತ್ರೆ ತುಂಬೋ ಕಾರ್ಯ:
ಜೋಗಿ ಪಾತ್ರೆ ತುಂಬೋ ಕಾರ್ಯದ ದಿನ ಜೋಗಿ ತರುವ ಪಾತ್ರೆಗೆ (ಮಾಯಾ ಪಾತ್ರೆ) ಮನೆಯ ಯಜಮಾನ ತುಳಸೀಕಟ್ಟೆಯ ಎದುರು ಬಾಳೆ ಎಲೆಯಲ್ಲಿ ಒಂದು ಅಕ್ಕಿ ಎಡೆಯನ್ನು ಸಿದ್ಧ ಮಾಡಿಟ್ಟು ಅದೇ ಸಾಲಿನಲ್ಲಿ ಇಟ್ಟಿರುವ ಇನ್ನೊಂದು ಎಡೆಗೆ ತ್ರಿಶೂಲ ಎಡೆ ಎನ್ನುತ್ತಾರೆ. ಮನೆಯ ಯಜಮಾನ ಮಾಯಾ ಪಾತ್ರೆಗೆ ಅಕ್ಕಿ, ತರಕಾರಿ ತುಂಬುತ್ತಾರೆ. ಮಾಯಾ ಪಾತ್ರೆಯನ್ನು ಎಡೆಯ ಮೇಲಿಟ್ಟು ಪೂಜಿಸುವ ಜೋಗಿಯು ನಂತರ ತ್ರಿಶೂಲದ ಎಡೆಯ ಮುಂದೆ ಊಟದ ಎಡೆ ಇಡುತ್ತಾನೆ. ಯಜಮಾನ ಅದಕ್ಕೆ ಪೂಜಿಸಿದ ಬಳಿಕ ಕುಟುಂಬದವರೆಲ್ಲ ನಮಸ್ಕರಿಸುತ್ತಾರೆ.
ಕೊನೆಯಲ್ಲಿ ಯಜಮಾನ ಹಾಗೂ ಕುಟುಂಬದ ಗಂಡಸರು ಮಾಯಾ ಪಾತ್ರೆಗೆ ಸುತ್ತು ಹಾಕಿ ತಾವು ಮಾಡಿದ ಕಾರ್ಯದಲ್ಲಿ ಆದ ಲೋಪ ದೋಷಗಳನ್ನು ಮನ್ನಿಸುವಂತೆ ಬೇಡಿಕೊಳ್ಳುತ್ತಾರೆ. ಜೋಗಿ ಮಾಯಾ ಪಾತ್ರೆಯನ್ನು ತೆಗೆದುಕೊಂಡು ತನ್ನ ಊರಿಗೆ ಮರಳುತ್ತಾನೆ. ನಂತರ ಕುಟುಂಬದವರೆಲ್ಲ ಸೇರಿ ಮಂಟಪವನ್ನು ವಿಸರ್ಜಿಸಿ ದೇವರ ಮುಡಿಪು ಕಟ್ಟುತ್ತಾರೆ. ಒಟ್ಟಿನಲ್ಲಿ 5 ದಿನ ಸಾಕ್ಷಾತ್ ತಿರುಪತಿಯೇ ಇಲ್ಲಿ ಮೇಳೈಸಿದಂತೆ ಹರಿದಿನ ಅದ್ಧೂರಿಯಾಗಿ ನಡೆಯುತ್ತದೆ. ಒಂದಾದ ಮೇಲೊಂದರಂತೆ ಹರಿಸೇವೆಗಳು ನಡೆಯುತ್ತಲೇ ಇರುತ್ತದೆ. ಈ ಹರಿಸೇವೆಯನ್ನು ಕಣ್ತುಂಬಿಕೊಳ್ಳುವ ಭಾಗ್ಯ ಭಟ್ಕಳದ ತಿಮ್ಮಪ್ಪನ ಭಕ್ತರಿಗೆ ಒಲಿದು ಬರುತ್ತಲೇ ಇರುತ್ತದೆ.
ಕೃಪೆ
ವಿಜಯ ಕರ್ನಾಟಕ (ಉ. ಕನ್ನಡ)
#tirupati #hariseve #bhatkal #uttarakannada #kunitha #gonda #gondtribe #gondi #gond #karnataka #coastalkarnataka #malenadu #murudeswar #murudeshwartemple #nagayakshe #bittibellu #dharmasthala #kukkesubramanya #sirsi #mantralaya #bangalore
ನಮ್ಮ ಕುಟುಂಬ ನನ್ನ ಹೆಮ್ಮೆ ❤️💐🙏